Tuesday, March 15, 2011

ನನ್ನ ಒಲವಿನ ಹುಡುಗಿ..

ನನ್ನ ಒಲವಿನ ಹುಡುಗಿ ಬೆಳ್ಳಕ್ಕಿ ನಗು ಚೆಲ್ಲಿ 
ಕಾದಿಹಳು ನನ್ನ ನಗೆ ನೋಡಲೆಂದು 
ಮಾತು ಕನಸುಗಳಲ್ಲಿ ಅವಳೆ ಹರಿದಾಡುವಳು 
ಮತ್ತೆ ಬರುವಳು, ಎಲ್ಲಿ? ಎಂದು ?

ಅವಳು ಮಾತಾಡಿದರೆ ನಾನು ಮಾತನೆ ಮರೆತು
ಮೀಯುವೇನು ಅವಳುಸಿರ ಹಾಡಿನಲ್ಲಿ 
ನಾನೊಮ್ಮೆ ಮುನಿದರೂ ಅವಳ ದನಿ ತಡೆಯುವುದು
ಮತ್ತೆ ಕರಗುವೆ ಒಲವ ಮಾತಿನಲ್ಲಿ

ಅವಳು ಮಾತಾಡದಿರೆ ನನ್ನ ದನಿ ಅಡಗುವುದು
ನೋಯುವುದು ನನ್ನ ಮನ ಅವಳ ಹುಡುಕಿ 
ಎಲ್ಲೋ ಕರೆದಂತೆ , ಕರೆದು ದನಿ ಕೊಟ್ಟಂತೆ 
ಕಾಯುವೆನು ಎಲ್ಲ ದಿನ ಅವಳಿಗಾಗಿ..


ಈಶ್ವರ ಕಿರಣ ಭಟ್
೧೦/೦೩/೨೦೧೧

2 comments:

ರವಿ ಮೂರ್ನಾಡು said...

ನಾನು ಏಕೆ ಮತ್ತೊಮ್ಮೆ ಗೀಚಲು ಹೇಳಿದೆನೆಂದರೆ, ಇದು ಅನಾದಿ ಕಾಲಕ್ಕೂ ಸಾರ್ವಕಾಲಿಕ ಕವಿತೆ.ಮುಂದೊಂದು ದಿನ ಮಾನ್ಯ ಜಯಂತ ಕಾಯ್ಕಿಣಿಯವರಂತೆ ಸಿನಿಮಾ ಕ್ಷೇತ್ರಕ್ಕೂ ಕಾಲಿಡುವ ಸಾಧ್ಯತೆಯುಂಟು.ಗೀಚಿ ತೆಗೆದರೆ ಗಾಯನದ ಲಹರಿಗಳಲ್ಲಿ ಬರುವ ಕೆಲವು ಮಿಕ್ಕುವ ಶಬ್ಧಗಳು ಈಗಲೇ ತೆಗೆದು ಹಾಕಬಹುದೆಂದು ಅನಿಸಿಕೆ ವ್ಯಕ್ತಪಡಿಸಿದೆ.ಕವಿತೆಯಾಗಿ ಎಲ್ಲವೂ ಸರಿಯಾಗಿದೆ, ಆದರೆ ಗಾಯನಕ್ಕೆ ರಾಗ ಆಯ್ಕೆಯಾದಾಗ ಎರಡು ಶಬ್ದಗಳನ್ನು ಒಮ್ಮೆಲೇ ಉಚ್ಚರಿಸಬೇಕಾಗಬಹುದು. ಉದಾಃ ನನ್ನ ಒಲವಿನ ಅಂತ ಇದೆ,ಗಾಯನದ ಧಾಟಿಗಯಲ್ಲಿ ಕೆಲವು ರಾಗಕ್ಕೆ ತೆಗೆದುಕೊಳ್ಳುವಾಗ ಅದನ್ನು ನನ್ನೊಲವಿನ ಅಂತ ಮಾಡಬೇಕಾಗುತ್ತದೆ. ಅಂದರೆ ಒಂದು " ಅ" ಅನ್ನುವ ದೀರ್ಘತೆ ಕಡಿಮೆಯಾಗುತ್ತದೆ. ಅಂತಹದ್ದು ಇದ್ದರೆ ಸರಿಯಾಗಲಿ ಅನ್ನುವ ಅನಿಸಿಕೆ ಇತ್ತು. ಚೆನ್ನಾಗಿದೆ ಕವಿತೆ. ಮುಂದೆಯೂ ಚೆನ್ನಾಗಿ ಬರಲಿ.

ಈಶ್ವರ said...

ಹೌದು ರವಿ ಸರ್. ಧನ್ಯವಾದ ನಿಮ್ಮ ಸಲಹೆಗೆ . ನಿಮ್ಮ ಕಾಳಜಿ ಹೀಗೆ ಇರಲಿ.