Tuesday, August 27, 2013

ಅಷ್ಟಮೀ ಗೀತ!

ಅತ್ತಿಮರದಿಣುಕಿನಲಿ ಕಾಣುವನು ಶ್ರೀಕೃಷ್ಣ
ಅವನ ಶಲ್ಯದ ಜೊತೆಗೆ ಅವಳ ಗೆಜ್ಜೆ!
ಹಿಡಿಯಹೋದೆಯ ಸಖಿಯೆ ಅವನಂತ ನಲ್ಲನ
ಹುಡುಕಲಾರಿರಿ ನೀವು ಮೀನ ಹೆಜ್ಜೆ.
~
ಕೊಳಲ ಬಿಡು ಕನ್ನಿಕೆಯೆ, ಕೃಷ್ಣ ಹೋಗಲಿ ಸಾಗಿ
ಅವನಿಗೇನವಸರವು ತಿಳಿಯುತಿಹುದು!
ಅವನ ಪ್ರೀತಿಯ ಸಖಿಯು ಕಾಯುತ್ತಲಿಹಳಲ್ಲಿ
ರಾಧೆಗೂ ಈಗೀಗ ಜಂಭ ಹೌದು.
~
ನನ್ನರಸ ಏನಾಯ್ತು? ಯಾರೋ ಚಿವುಟಿಹರಲ್ಲ
ಈ ಊರ ಹುಡುಗಿಯರಿಗೆಷ್ಟು ಸೊಕ್ಕು?
ನಿನ್ನ ಕೆನ್ನೆಯ ಕೆಂಪು ಎಂತ ಸೋಜಿಗ ಚೆಲುವ
ನಾನಿನ್ನ ರಾಧೆ, ನೀ ನನ್ನ ಹಕ್ಕು.
~
ನಂದಗೋಕುಲದೊಳಗೆ ಮುರಳಿಲೋಲನ ಕರೆದು
ನಂದಭೂಪನ ಮಡದಿ ಮುದ್ದಿಸಿದಳು;
ಓರೆನೋಟದ ಹುಡುಗಿ ಹಾಳುಮಾಡಿದಳಲ್ಲ
ನನ್ನ ಕಂದನ ತುಟಿಯ ರಂಗುಗಳನು!
~
ಸಖಿಯು ಸಿಂಗರಿಸಿಹಳು ನಿನ್ನ ಮನೆಯಂಗಳವ
ಓ ರಾಧೆ ನಿನಗಿಂದು ಹಬ್ಬವೇನೆ?
ಗೋಪಾಲ ಬಂದಿಹನು ಹುಟ್ಟುಹಬ್ಬದ ನೆವದಿ
ಅವನ ಮನಸಲಿ ನಿಂತ ನೀರೆ ನೀನೆ!
~
~
ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು..

Sunday, August 25, 2013

ನಲ್ಲೆ ನೀ ಹೋಗದಿರು ನನ್ನ ತೊರೆದು

ನಲ್ಲೆ ನೀ ಹೋಗದಿರು ನನ್ನ ತೊರೆದು;
ಹೊರಟುದೇತಕೆ ನೀನು ಹೀಗೆ ಮುಳಿದು!
ದಾರಿಯಲಿ ಬಿದ್ದಿರುವ ಮಲ್ಲೆಹೂವಿನ ರಾಶಿ
ಕಂಡಾದರೂ ಬಾರೆ, ನನ್ನ ನೆನೆದು.

ಹೂವಂತ ಸಖಿಯರು ಇದ್ದಾರು ನನಗೆಂದು
ನಿನ್ನ ಅಂಜಿಕೆಯೇನು? ಓ ಮಲ್ಲಿಗೆ
ಇದ್ದವರು ಹೂವಂತ ಮನಸಿನಾ ಗೆಳತಿಯರು
ನೀನು ಹೂವಿನ ರಾಣಿಯಂತೆ ನನಗೆ.

ಇಂತಹಾ ಮಾತುಗಳನಾಡುವುದು ಕೆಣಕಲು
ನಿನ್ನ ಹುಸಿಮುನಿಸಿಗೆ ನಾನು ನಗಲು;
ಈ ಹುಚ್ಚು ಪ್ರೀತಿಯನು ನೀನೂ ತಿಳಿದಿರುವೆ
ಆದರೂ ಇನ್ನೇಕೆ ಮುಳಿಸಿನೊಡಲು?

ಬಾರೆನ್ನ ಹೂವೊಲವೆ; ನನ್ನ ನಗೆ ಮಲ್ಲಿಗೆಯೆ
ನಿನ್ನ ದಾರಿಗೆ ನಾನು ಮಲ್ಲೆಯಂತೆ
ಎರಡು ಜೀವದ ಬದುಕು ಒಂದಾಗಿ ಸಾಗಲು
ಮನಬಿಚ್ಚಿ ನೀ ಬಾರೆ ತೊರೆದು ಚಿಂತೆ.

ಚಿತ್ರ :ಗೋವಿಂದ ಭಟ್ ಬಲ್ಲೆಮೂಲೆ

Friday, August 16, 2013

ಅವನೋ ಅಲ್ಲ ಇವನೋ...

ಅವ ಪೇಟೆಯ ಹುಡುಗ
ಇವ ಹಳ್ಳಿಯ ಹುಡುಗ.

ಅವನೆಂಟನೆ ಸ್ಟಾಂಡರ್ಡು
ಇವನೆಂಟನೆ ಎರಡು!

ಅವನ ಬಣ್ಣ ಬೆಣ್ಣೆ
ಇವನ ಬಣ್ಣ ಎಣ್ಣೆ

ಅವನಿಗಿತ್ತು ಸಾಕ್ಸು
ಇಂವ ಭೂಮಿಯ ಜೆರಾಕ್ಸು!

ಅವನು ಹಾಲು ಕುಡಿಯುವವ
ಇವನು ಹಾಲು ಕರೆಯುವವ

ಅವನಿಗೆ ಚೇಳು ಕಚ್ಚುವುದು;
(ಸರ್ ಚೇಳು ನೋಡಿದವರು)
ಇವನಿಗೆ ಚೇಳು ಕುಟುಕುವುದು;
(ಮಾಸ್ತರು ನೋವುಂಡವರು)

ಮುಂದೆ?

ಅವನು ಎಲ್ಲ ಗಳಿಸುವವನು
ಇವನು ಎಲ್ಲ ಉಳಿಸುವವನು.

Wednesday, August 14, 2013

ಮಲ್ಲಿಗೆ ಬೇಕೇ?

ಈ ದಾರಿಯಲಿ ಬರುವ ಜನಕೆಲ್ಲ ಗೊತ್ತಿಹುದು
ಇಲ್ಲಿ ಹೂವಿನ ಹಾಡು ಕೇಳುತಿತ್ತು;
ನಲ್ಲೆಗೋ ನಲ್ಲನಿಗೋ ಮಲ್ಲಿಗೆಯ ಮಾತುಗಳು
ಮೆಲ್ಲ ಪಿಸುದನಿಗಳಲಿ ತಿಳಿಯುತಿತ್ತು.

ನಸುಬೆಳಗು ಅರಳಿರುವ ಮಲ್ಲೆ ಹೂಬನದಿಂದ
ಗಾಳಿಯಲಿ ಬೆರೆತು ಹೊಸ ಕಂಪು ನೀಡಿ,
ಹಾದಿಹೋಕನ ಮನಸು ಪ್ರೀತಿಯಿಂದಲಿ ಬೆಳಗಿ
ದಾರಿ ನಲಿವಾದುದು ನೋವು ದೂಡಿ.

ಸಂಜೆಯಾಗುತ ಹೀಗೆ ನಲ್ಲನಲ್ಲೆಯರೆಲ್ಲ
ಈ ದಾರಿಯನು ಹಿಡಿದು ನಡೆಯಬೇಕು
ಮಲ್ಲೆ ಹೂವಿನ ಹಾಡು ಕೇಳಬೇಕೆನ್ನುವರೆ
ಮೊದಲು ಹೂವಿನ ಬಳ್ಳಿ ಬೆಳೆಸಬೇಕು.

Wednesday, August 7, 2013

ನಿನ್ನ ನೆನಪು ಹೀಗೆ ಬಂದು

ನಿನ್ನ ನೆನಪು ಹೀಗೆ ಬಂದು ನನ್ನನಿಂದು ಕಾಡಿದೆ
ನೀನಿಲ್ಲದ ಈ ಸಂಜೆಯು, ಎಲ್ಲ ಹೂವೂ ಬಾಡಿದೆ.

ಹರಿವ ತೊರೆಯು ಉಸುರಲಿಲ್ಲ ನಿನ್ನ ನಡೆಯ ಸದ್ದು
ಸುರಿವ ಮಳೆಯ ದನಿಯಲಿಲ್ಲ ನಿನ್ನ ಮಾತು, ಮುದ್ದು!
ಮರಳಿ ಇರುಳು ತೊನೆಯುತಿಹುದು ನಿನ್ನಾ ಹೆರಳ ಕದ್ದು
ಕರಗದೇನಾ ಮರುಗುತಿಹೆನಾ ನಿನ್ನ ನೆನಪು ಹೊದ್ದು!

ಸುಳಿವ ತಂಗಾಳಿಗಿಲ್ಲವಲ್ಲ ನಿನ್ನ ನೆನಪು ಗೆಳತಿ
ಉಳಿಸಿ ಹೋಗುತಿಹುದು ಹುಸಿಯ! ನೀ ಸೋಕದ ರೀತಿ
ಗಳಿಗೆಗೊಮ್ಮೆ ನೆನಪಿಸುವುದು ಚಳಿಯು ನಿನ್ನ ಸವತಿ
ಸುಲಭವೇನೆ ಮರೆಯುವುದು? ನನ್ನ ಹೇಗೆ ಮರೆತಿ?

ಬಾರೆ ಗೆಳತಿ ಸನಿಹವಿದ್ದು ಈ ಮಳೆಯನು ಸೋಲಿಸು
ಕಾರಿರುಳಿನ ಹುಚ್ಚುತನಕೆ ಶಾಂತತೆಯನು ಕಲಿಸು.

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ

ಸುಮ್ಮನಿರುವ ಸಮಯದಲ್ಲಿ ನೀನು ನನ್ನ ಕಾಡುವೆ
ಕಾಡಿದರೂ ನೋವಾದರೂ ನಾನು ಹಾಡು ಹಾಡುವೆ!

ದೂರದಲ್ಲಿ ಯಾರೋ ಪ್ರೇಮಿ ಎಡವಿದಂತೆ ವೀಣೆಯ
ಮೀರಿ ಬರುತಲಿಹುದು ಗೆಳತಿ ಒಂದೇ ಎಳೆಯ ರಾಗವು
ನನ್ನನೇ ಕರೆದಂತಿದೆ ನನಗಾಗಿಯೆ ಮೊರೆದಂತಿದೆ!
ಬರೆದೆನಿದೋ ಹಾಡುತಲಿರು ಈ ನೋವಿನ ಹಾಡನು

ಮಳೆಗೆ ಹೊಟ್ಟೆಕಿಚ್ಚು ಬಂದು ಆ ರಾಗವ ಕೆದಕಿದೆ
ಈ ಬೇಸರ ಕಣ್ಣೀರೊಲು ಹನಿಯ ಜೊತೆಗೆ ಬೆರೆತಿದೆ
ಹಾಡು ಕಾಯಬಹುದೆ ನನಗೆ ಮುಂದಿನ ದಿನ ಹುಟ್ಟಲು?
ನೋವು ಒಂದು ಸಹಜ ಪ್ರಾಸ! ಎಲ್ಲಾ ಕಾವ್ಯ ಕಟ್ಟಲು.

ಹಳೆಯ ನಮ್ಮ ನಗೆಗಳೆಲ್ಲ ಹೊಳೆವ ಮಳೆಯ ಹನಿಗಳಂತೆ
ಬೆಳಕಿನ ಕೋಲ್ಮಿಂಚಿಗಾಗಿ ಕಾಯಬೇಕು ನಾನು!
ಸಿಡಿಲಾಗಿಯೆ ಬರಬಾರದೆ ನನ್ನ ಪ್ರೀತಿ ಬೆಳಕೆ
ಬೇಸರವನೆ ಕೊನೆಯಾಗಿಸಿ ನಾ ಸೇರುವೆ ಬಾನು!