Sunday, February 8, 2015

ಕಾಣೆಯಾಗಿದೆ : ಬಾಲ್ಯದ ಚಿತ್ರ.

ನನ್ನ ಬಾಲ್ಯದ ಚಿತ್ರ ಕಾಣೆಯಾಗಿದೆ
ಹುಡುಕಿಕೊಟ್ಟವರಿಗುಂಟು
ಪೆಪ್ಪರಮೆಂಟು.

ಮೀಸೆಯಿಲ್ಲದ ಮುಖವು,
ಬಿಳಿಯಿರದ ತಲೆಕಸವು
ಮೇದು ಕಪ್ಪಾಗಿರುವ ಹಲ್ಲುಕುಳಿಯು
ಜೇಬು ಹರಿದಿಹ ಚಡ್ಡಿ
ಅದಲು ಬದಲಿನ ಗುಂಡಿ
ಕಡ್ಡಿಮೀರಿದ ಹೊದಿಕೆ ಇರುವ ಕೊಡೆಯು

ಕವಚ ಕಳೆದಿಹ ಬಾಲು
ಬುಡವು ಸವೆದಿಹ ಬ್ಯಾಟು
ಜಾರುವುದಕೇ ಇರುವ ಪಾದರಕ್ಷೆ
ಓದದಿದ್ದರು ಬರೆವ
ಬರೆಯದಿದ್ದರು ಬೆಳೆವ
ಆ ಕತೆಯ ಈ ಕತೆಯ ಪಾಠ ಶಿಕ್ಷೆ!

ಬೇಸಿಗೆಯ ಆಟದಲಿ
ಗೇರು,ಮಾವನ ಹೊಸಕಿ
ತೆಂಗು ಕಂಗಿನ ಮರಕೆ ಹತ್ತಿ ಹಾರಿ;
ಯಾವುದೋ ಕಾಲಕ್ಕೆ
ಮರೆತು ಇಟ್ಟಿಹೆನೆಲ್ಲೋ
ನನ್ನ ಬಾಲ್ಯದ ಚಿತ್ರ ಹುಡುಕಿ ಕೊಡಿರಿ.

2 comments:

Badarinath Palavalli said...

ಜೊತೆಗೆ ನನ್ನದೊಂದಿಷ್ಟು ಬಾಲ್ಯದ ಗೆಳತಿಯರ ಪಟ್ಟಿಯಿದೆ ಭಟ್ರೇ!
ಪದ್ದು, ಮೀನಾಕ್ಷಿ, ಯಾದಮ್ಮ, ಪ್ರಮೀಳ, ಸರ್ಸೂ, ವಿಜೀಲಚ್ಮೀ, ಕಮ್ಲೀ....
ನಿಮ್ಮ ಬರಹಗಳ ಮೋಡಿಗಿದೋ ಸಹಸ್ರ ಶರಣು.

sunaath said...

ನವಿರು nostalgia!